ಓಪನ್ಹೈಮರ್, ರಾಬರ್ಟ್: 1904-67, ಭೌತವಿಜ್ಞಾನಿ; ಅಮೆರಿಕ ದೇಶದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಲಾಸ್ ಅಲಮಾಸಿನಲ್ಲಿ ಪರಮಾಣುಬಾಂಬನ್ನು ತಯಾರಿಸುವ ಖಚಿತ ಉದ್ದೇಶದಿಂದ ಸ್ಥಾಪಿತವಾದ (1943) ವಿಜ್ಞಾನ ಪ್ರಯೋಗ ಮಂದಿರದ ಪ್ರಥಮ ನಿರ್ದೇಶಕ. ಈ ಮಂದಿರವನ್ನು ಕಟ್ಟಿ ಅದರ ಚಟುವಟಿಕೆಗಳನ್ನು ದಿಗ್ದರ್ಶಿಸಿ (1943-45) ಮುಂದಿನ ಮೂರು ವರ್ಷಗಳ ಮೊದಲೇ ಸಿದ್ಧಿ ಪಡೆದ ವಿಜ್ಞಾನಿ-ಆಡಳಿತಗಾರ.

ನ್ಯೂಯಾರ್ಕ್ ನಗರದಲ್ಲಿ 22 ಏಪ್ರಿಲ್ 1904ರಂದು ಸುಸಂಸ್ಕೃತ ಹಾಗೂ ಶ್ರೀಮಂತ ಕುಟುಂಬದಲ್ಲಿ ಓಪನ್ಹೈಮರ್ ಜನಿಸಿದ. ಬಲು ತೀಕ್ಷ್ಣಮತಿ ಎಂದು ಚಿಕ್ಕಂದಿನಿಂದಲೇ ಹೆಸರಾಂತ ಈ ತರುಣನ ವಿಶ್ವವಿದ್ಯಾಲಯ ಮಟ್ಟದ ವಿದ್ಯಾಭ್ಯಾಸ ನಡೆದದ್ದು ಹಾರ್ವರ್ಡಿನಲ್ಲಿ (1925). ಸಹಜ ಒಲವು ಭೌತವಿಜ್ಞಾನ ಸಂಶೋಧನೆಯ ಕಡೆಗೆ ಇತ್ತು. ಪ್ರಾರಂಭದಲ್ಲೇ ಶಕಲಸಿದ್ಧಾಂತ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಪ್ರಸಿದ್ಧಿಗೆ ಬಂದ. ವಿಶ್ವಕಿರಣಗಳು (ಕಾಸ್ಮಿಕ್ ರೇಸ್), ಪರಮಾಣು ಭೌತಶಾಸ್ತ್ರ, ಮೂಲಕಣಗಳು ಮತ್ತು ರಿಲೆಟಿವಿಟಿ-ಈ ಕ್ಷೇತ್ರಗಳಲ್ಲಿ ಗಮನಾರ್ಹ ಸಂಶೋಧನೆಗಳನ್ನು ಮಾಡಿದ್ದಾನೆ. 1929ರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಸೈದ್ಧಾಂತಿಕ ಭೌತವಿಜ್ಞಾನÀ ಉಪಪ್ರಾಧ್ಯಾಪಕನಾಗಿ ಸೇರಿ 1935ರ ವೇಳೆಗೆ ಅಲ್ಲೇ ಪ್ರಾಧ್ಯಾಪಕನಾದ. ಇದರ ಜೊತೆಗೆ ಓಪನ್ಹೈಮರ್ ಕ್ಯಾಲಿಫೋರ್ನಿಯದ ಟೆಕ್ನಾಲಜಿ ಇನ್ಸ್‌ಟಿಟ್ಯೂಟಿನಲ್ಲಿ ಪಾಠ ಹೇಳುತ್ತಿದ್ದು (1929-47) ವಿಶ್ವಕಿರಣಗಳ ಸಂಶೋಧನೆಗಳಿಗೆ ಪ್ರಸಿದ್ಧವಾದ ಆ ಸಂಸ್ಥೆಯಲ್ಲಿ ನಡೆದ ಪ್ರಯೋಗದಲ್ಲಿ ಸಹಕರಿಸಿದ್ದ, ಮೀಸಾನ್ಸ್‌ ಎಂದು ಈಗ ಕರೆಯಲಾಗುತ್ತಿರುವ ಭಾರವಾದ ಕಣಗಳು ವಿಶ್ವಕಿರಣಗಳಲ್ಲಿವೆಯೆಂದು ಸೂಚಿಸಿದುದು ಮಾತ್ರವಲ್ಲದೇ ವಿಶ್ವಕಿರಣಗಳ ಸುರಿಮಳೆಗಳ (ಕಾಸ್ಮಿಕ್ ರೇ ಶವರ್ಸ್) ಉತ್ಪತ್ತಿಯಲ್ಲಿ ಮೀಸಾನ್ ಕಣಗಳು ವಹಿಸುವ ಪಾತ್ರಕ್ಕೆ ಒಂದು ವಾದವನ್ನೂ ಮಂಡಿಸಿದ, ಕೃತಕ ಬದಲಾವಣೆಗಳಿಗೆ (ಆರ್ಟಿಫಿಶಿಯಲ್ ಟ್ರಾನ್ಸ್‌ಮುಟೇಶನ್ಸ್‌) ಸಂಬಂಧಿಸಿದಂತೆ ಹಲವು ಪ್ರಯೋಗಗಳನ್ನು ವಿವರಿಸಲು ಈತ ಒಂದು ಹೊಸ ವಾದವನ್ನೇ ಮುಂದಿಟ್ಟ. ಡ್ಯೂಟ್ರಾನ್ ಕಣ ಪ್ರೋಟಾನ್ ಮತ್ತು ನ್ಯೂಟ್ರಾನುಗಳಿಂದ ಆಗಿದ್ದು ಒಂದು ನ್ಯೂಕ್ಲಿಯಸಿನ ವಿದ್ಯುತ್ ಕ್ಷೇತ್ರದಲ್ಲಿ ಅವು ಬೇರ್ಪಡುವುವೆಂದೂ ನ್ಯೂಕ್ಲಿಯಸಿನ ಧನವಿದ್ಯುತ್ತಿನಿಂದ ವಿಕರ್ಷಣಹೊಂದಿ ಪ್ರೋಟಾನ್ ಹೊರದೊಡಲ್ಪಡುವುದೆಂದೂ ನ್ಯೂಟಾನ್ ಆ ನ್ಯೂಕ್ಲಿಯಸನ್ನು ಪ್ರವೇಶಿಸುವುದೆಂದೂ ಓಪನ್ಹೈಮರ್ ಪ್ರತಿಪಾದಿಸಿದ. ಈ ಕ್ರಿಯೆಯನ್ನು ಓಪನ್ಹೈಮರ್-ಫಿಲಿಪ್ಸ್‌ ಕ್ರಿಯೆ ಎಂದು ಕರೆಯುವುದು ವಾಡಿಕೆ.
ಪರಮಾಣುಬಾಂಬಿನ ಪ್ರಥಮ ಯಶಸ್ವೀ ಪರೀಕ್ಷೆ ಮುಗಿದೊಡನೆಯೇ (1945) ಓಪನ್ಹೈಮರ್ ಪ್ರಯೋಗಮಂದಿರದ ನಿರ್ದೇಶಕತ್ವಕ್ಕೆ ರಾಜೀನಾಮೆಯಿತ್ತು ಹೊರಬಂದು ಕ್ಯಾಲಿಪೋರ್ನಿಯದಲ್ಲಿದ್ದ ತನ್ನ ಮೊದಲಿನ ಎರಡು ಪ್ರಾಧ್ಯಾಪಕ ಹುದ್ದೆಗಳಿಗೆ ಮರಳಿದ. ಮುಂದೆ ಪ್ರಿನ್ಸ್‌ಟನ್ನಿನ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌್ಡ ಸ್ಟಡಿ ಸಂಸ್ಥೆಯ ನಿರ್ದೇಶಕನಾಗಿ ನೇಮಕಗೊಂಡ (1947). ಯುದ್ಧೋತ್ತರ ಕಾಲದಲ್ಲಿ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಅಸಂಖ್ಯಾತ ಗಮನಾರ್ಹ ಕೊಡುಗೆಗಳನ್ನು ನೀಡಿದ ಏಕೈಕ ಸಂಸ್ಥೆಯಿದು. ಈ ಹುದ್ದೆಯಿಂದ 1966ರಲ್ಲಿ ನಿವೃತ್ತಿ ಪಡೆದು ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿ ಮುಂದುವರಿದ. 1947-52ರವರೆಗೆ ಅಮೆರಿಕ ದೇಶದ ಪರಮಾಣುಶಕ್ತಿ ಆಯೋಗದ (ಅಟಾಮಿಕ್ ಎನರ್ಜಿ ಕಮಿಶನ್) ಅಧ್ಯಕ್ಷನಾಗಿ ಸಹ ಕೆಲಸಮಾಡಿದ. ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಸಂಸ್ಥೆ ಈತನನ್ನು 1941ರಲ್ಲಿ ತನ್ನ ಸದಸ್ಯನಾಗಿ ಚುನಾಯಿಸಿ ಗೌರವಿಸಿತು. ಓಪನ್ಹೈಮರ್ ಫೆಲೋ ಆಫ್ ದಿ ರಾಯಲ್ ಸೊಸೈಟಿ ಗೌರವವನ್ನು ಸಹ ಪಡೆದ. ಈತನ ಸಂಶೋಧನೆಗಳ ಹಿರಿಮೆಯನ್ನು ಗಮನಿಸಿ 1963ರ ಫರ್ಮಿ ಬಹುಮಾನವನ್ನು ನೀಡಲಾಯಿತು.

ಸೈದ್ಧಾಂತಿಕ ವಿಜ್ಞಾನಿಯಾಗಿ, ದಕ್ಷ ಆಡಳಿತಗಾರನಾಗಿ, ಸಂಸ್ಥೆಯನ್ನು ಕಟ್ಟಿ ಪೋಷಿಸುವ ಮಹಾಚೈತನ್ಯವಾಗಿ ಓಪನ್ಹೈಮರ್ ಸಾಧಿಸಿದ ಯಶಸ್ಸು ಅಪುರ್ವವಾದದ್ದು. ಆದರೆ ಪರಮಾಣುಬಾಂಬಿನ ಮಾರಕ ಹತ್ಯಾಕಾಂಡವನ್ನು (ಎಂದರೆ ತನ್ನ ಪ್ರಯತ್ನಗಳ ಪ್ರತ್ಯಕ್ಷ ಫಲವನ್ನು) ಕಂಡ ಈತ (ಜಪಾನ್ ವಿರುದ್ಧ ಪರಮಾಣು ಬಾಂಬಿನ ಪ್ರಯೋಗವನ್ನು ಅನುಮೋದಿಸಿದ್ದರೂ) ಯುದ್ಧಾನಂತರದ ದಿವಸಗಳಲ್ಲಿ ಬಾಂಬಿನ ಅಂತಾರಾಷ್ಟ್ರೀಯ ಹತೋಟಿಗೋಸ್ಕರ ಬಹಳವಾಗಿ ಹೆಣಗಾಡಿದ. ಹೈಡ್ರೊಜನ್ ಬಾಂಬಿನ ಆವಿಷ್ಕರಣದ ದಾರಿಯನ್ನು ವಿರೋಧಿಸಿದ. 

ಆದರೆ ಅಧ್ಯಕ್ಷ ಟ್ರೂಮನ್ ಈ ವಿರೋಧಗಳನ್ನು ನಿರಾಕರಿಸಿದುದರಿಂದ (1949) ಓಪನ್ ಹೈಮರನ ಮಾತು ನಡೆಯಲಿಲ್ಲ. ತಾನು ರಚಿಸಿ ಪೋಷಿಸಿದ ಪರಿಸರದಲ್ಲಿಯೇ ಪರಮಾಣು ಶಕ್ತಿಗೆ ಸಂಬಂಧಿಸಿದಂಥ ವರ್ಗೀಕೃತ ವಿವರಗಳಿಗೆ (ಎಂದರೆ ಗುಪ್ತ ಫಲಿತಾಂಶಗಳು) ಪ್ರವೇಶ ದೊರೆಯದೇ ಒಂದು ವಿಧದ ಅಜ್ಞಾತವಾಸ ಈ ವಿಜ್ಞಾನಿಗೆ ಪ್ರಾಪ್ತವಾಯಿತು.

ಸೈಂಟಿಫಿಕ್ ಫೌಂಡೇಶನ್ಸ್‌ ಫಾರ್ ವಲ್ರ್ಡ್‌ ಆರ್ಡರ್ ಎಂಬ ಗ್ರಂಥವನ್ನು 1947ರಲ್ಲೂ ಸೈನ್ಸ್‌ ಅಂಡ್ ದಿ ಕಾಮನ್ ಅಂಡರ್ಸ್ಟೇಂಡಿಂಗ್ ಎಂಬ ಗ್ರಂಥವನ್ನು 1954ರಲ್ಲೂ ದಿ ಓಪನ್ ಮೈಂಡ್ ಎಂಬ ಗ್ರಂಥವನ್ನು 1955ರಲ್ಲೂ ಬರೆದು ಪ್ರಕಟಿಸಿದ್ದಾನೆ. 18 ಫೆಬ್ರವರಿ 1967 ಪ್ರಿನ್ಸ್‌ಟನ್ನಿನಲ್ಲಿ ನಿಧನವಾದನು.	(ಆರ್.ಎ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ